ಡಾ. ಬೆಸಗರಹಳ್ಳಿ ರಾಮಣ್ಣ

         ಡಾ. ಬೆಸಗರಹಳ್ಳಿ ರಾಮಣ್ಣ ಇವರು ೧೯೩೮ ಮೇ ೧೮ರಂದು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ; ತಂದೆ ಚಿಕ್ಕಎಲ್ಲೇಗೌಡ. ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು, ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸುತ್ತಲೇ ಇದ್ದು, ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿ, ಗ್ರಾಮೀಣ ಬದುಕಿನ ನೈಜ ಚಿತ್ರಣವನ್ನೂ ತಮ್ಮ ಕಥೆಗಳ ಮೂಲಕ ಹೇಳುತ್ತಲೇ ಬಂದ ವೈದ್ಯರಾದ ಬೆಸಗರಹಳ್ಳಿಯ ರಾಮಣ್ಣನವರು ಹುಟ್ಟಿದ್ದು ೧೯೩೮ ರ ಆಗಸ್ಟ್‌ ತಿಂಗಳ ಸ್ವಾತಂತ್ರ್ಯ ದಿನಾಚರಣೆಯಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರ ಹಳ್ಳಿಯಲ್ಲಿ, ತಂದೆ ಕೃಷಿಕರಾದ ಎಲ್ಲೇಗೌಡ, ತಾಯಿ ದೊಡ್ಡತಾಯಮ್ಮ. ಪ್ರಾರಂಭಿಕ ಶಿಕ್ಷಣ ಬೆಸಗರಹಳ್ಳಿ ಮತ್ತು ಮದ್ದೂರಿನಲ್ಲಿ. ಇಂಟರ್ಮೀಡಿಯೇಟ್‌ ನಂತರ ಎಂ.ಬಿ.ಬಿ.ಎಸ್‌. ಪದವಿ ಪಡೆದದ್ದು ಮೈಸೂರಿನಲ್ಲಿ. ನಂತರ ಅರಿವಳಿಕೆ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮ. ಅಮೆರಿಕ ಮುಂತಾದ ವಿದೇಶಗಳಿಂದ ಉದ್ಯೋಗಕ್ಕೆ ಆಹ್ವಾನ ಬಂದರೂ ಆಯ್ದುಕೊಂಡದ್ದು ಹಳ್ಳಿಯ ವೈದ್ಯಕೀಯ ಸೇವೆಯ ಬದುಕು. ಗ್ರಾಮೀಣ ಪ್ರದೇಶದಲ್ಲಿ ಸುಮಾರು ೨೦ ವರ್ಷಗಳ ಕಾಲ ವೈದ್ಯರಾಗಿ ಕಾರ್ಯನಿರತರಾಗಿದ್ದರು. ಸರಕಾರಿ ವೈದ್ಯರಾಗಿ ನೇಮಕಗೊಂಡು ಕೊಡಿಯಾಲ, ಬೆಳ್ಳೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಹಳೇಬೀಡು ಮುಂತಾದ ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆಸಲ್ಲಿಸಿ ೧೯೯೬ ರಲ್ಲಿ ನಿವೃತ್ತಿ. ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ ವೈದ್ಯರೊಂದಿಗೆ ತಮ್ಮ ಕಾಯಕವನ್ನೂ ಹಂಚಿಕೊಂಡು ಬಿಹಾರದ ಬಾಗಲ್ಪುರದಲ್ಲಿ (೧೯೭೪) ನಡೆದ ಸಿಡುಬು ನಿರ್ಮೂಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಹಳ್ಳಿಯ ಬದುಕಿನೊಂದಿಗೆ ಮಿಳಿತವಾಗಿರುವ ಜಾನಪದ ಸಂಸ್ಕೃತಿಯ ಅಂಗವಾದ ಕಥೆ, ಲಾವಣಿ, ಪದಗಳು ರಾಮಣ್ಣನವರನ್ನೂ ಆಕರ್ಷಿಸಿತು. ಚಿಕ್ಕವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಿದ್ದ ತಂದೆಯ ವಯಸ್ಸಾದ ಸೋದರತ್ತೆ ಬೆಳದಿಂಗಳ ರಾತ್ರಿಗಳಲ್ಲಿ ಚಂದ್ರಲೋಕದ, ಪಾತಾಳಲೋಕದ ಸುರಸುಂದರಿಯರ, ಘನಘೋರ ಮಂತ್ರವಾದಿಗಳ ಹಕೀಕತ್ತುಗಳು, ಅವನೆಲ್ಲಾ ಎದುರಿಸಿ ಗೆದ್ದು ಬರುತ್ತಿದ್ದ ಧೀರ ರಾಜಕುಮಾರರ ಕಥೆಗಳು, ಅಣ್ಣನಾಗಿದ್ದ ದಿವಂಗತ ಪುಟ್ಟಸ್ವಾಮಿ ಗೌಡರು ತಂದುಹಾಕುತ್ತಿದ್ದ ಸಾಹಿತ್ಯ ಕೃತಿಗಳು, ಕುಮಾರವ್ಯಾಸ ಭಾರತದ ಪದ್ಯಗಳನ್ನೂ, ಕುವೆಂಪುರವರ ಸಣ್ಣಕತೆಗಳಿಗೆ ನಾಟಕ ರೂಪಕೊಟ್ಟು ಒಬ್ಬನೇ ಅಭಿನಯಿಸಿ ತೋರಿಸಿ ಸಂತೋಷದ ಸಂದರ್ಭದಲ್ಲಿ ನಗೆತರಿಸಿ, ದುಃಖದ ಸಂದರ್ಭದಲ್ಲಿ ಅಳುತರಿಸುತ್ತಿದ್ದು, ಇಂತಹ ಪ್ರಸಂಗಗಳಿಂದ ಪ್ರಭಾವಿತರಾದರು. ಹೈಸ್ಕೂಲಿನಲ್ಲಿದ್ದಾಗಲೇ ಬಸವರಾಜ ಕಟ್ಟೀಮನಿಯವರ ಕಥೆ, ಕಾದಂಬರಿಗಳು, ಮೆಡಿಕಲ್‌ ಓದುತ್ತಿದ್ದಾಗ ಕುವೆಂಪುರವರ ಸಂನ್ಯಾಸಿ ಮತ್ತು ಇತರ ಕಥೆಗಳು ಗಾಢ ಪ್ರಭಾವ ಬೀರಿದವು.

 

ಹೆಚ್ಚಿನ ಚಿತ್ರಗಳಿಗಾಗಿ ಚಿತ್ರಸಮೂಹಕ್ಕೆಹೋಗಿ.