ಮುಖಪುಟ

“ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ 2019”

ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ . ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019 ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ ” ಏಕತಾರಿ ” ಕಥಾ ಸಂಕಲನಕ್ಕೆ ಸಂದಿದೆ .

ಡಾ. ಎಸ್ ಜಿ ಸಿದ್ದರಾಮಯ್ಯ , ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ ಕಥಾಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ .

ಕನ್ನಡ ಕಥಾ ಪರಂಪರೆಗೆ ವಿಶಿಷ್ಟ ನುಡಿಗಟ್ಟು /ಕಾಣ್ಕೆಯ ಪರಿಚಯ ; ಮಾನವೀಯ ಸಂಗತಿಯ ಹೊಸ ಹೊಳವು ; ಬದುಕಿನ ಘಟನೆಗಳಲ್ಲಿಯೇ ಹೊಸ ಮಿಂಚಿನ ಹೊಳಪು ಮೂಡಿಸುವ ಶಕ್ತಿ ಕತೆಗಳಲ್ಲಿ ಇರಬೇಕು ಎನ್ನುವ ಮೂರು ಆಯ್ಕೆ ಮಾನ ದಂಡಗಳನ್ನು ಸಮಿತಿ ರೂಪಿಸಿಕೊಂಡಿತ್ತು .

ಈ ಮಾನದಂಡಗಳ ಆಧಾರದಲ್ಲಿ ಚನ್ನಪ್ಪ ಕಟ್ಟಿ ಅವರ “ಏಕತಾರಿ ” ಲೋಕೇಶ ಅಗಸನ ಕಟ್ಟೆಯವರ “ಮೀಸೆ ಹೆಂಗಸು ಮತ್ತು ಇತರ ಕಥೆಗಳು” ಹಾಗೂ ದೀಪ್ತಿ ಭದ್ರಾವತಿಯವರ “ಗೀರು” ಕಥಾ ಸಂಕಲನಗಳು ಅಂತಿಮವಾಗಿ ಪೈಪೋಟಿಗೆ ಇಳಿದಿದ್ದವು.

ಚನ್ನಪ್ಪ ಕಟ್ಟಿಯವರ ಕಥಾ ಸಂಕಲನದ ಎಲ್ಲಾ ಕಥೆಗಳು ನೆಲದ ಬೇರುಗಳನ್ನು ಹೀರಿಕೊಂಡು ಬದುಕಿನ ಸ್ಥಿತ್ಯಂತರಗಳನ್ನು ಸೂಕ್ಶ್ಮವಾಗಿ ಕಟ್ಟಿ ಕಲಾ ಕೃತಿಯ ಅನುಭವ ನೀಡುತ್ತಾ ಬದಲಾದ ಕಾಲಘಟ್ಟಗಳ ಮನುಷ್ಯ ಸಂಬಂಧಗಳ ನಾಡಿ ಮಿಡಿತವನ್ನು ನೀಡುತ್ತವೆ . ಈ ಕಾರಣಕ್ಕಾಗಿ “ಏಕತಾರಿ”ಕಥಾ ಸಂಕಲನವನ್ನು ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ .

101207715_10207203059351300_4551932234382180352_n

ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ

ಡಾ. ಬೆಸಗರಹಳ್ಳಿ ರಾಮಣ್ಣ ಅವರ ಬದುಕು ವೈದ್ಯ ವೃತ್ತಿ ಮತ್ತು ಸಾಹಿತ್ಯ ಕ್ಷೇತ್ರವನ್ನು ಮೀರಿ ಸಮಾಜ, ರಾಜಕೀಯ, ಜನಪರ ಆಂದೋಲನಗಳು, ಪರಿಸರ ಸಂರಕ್ಷಣೆ ಮುಂತಾದ ಜನಪರ ಕಾಳಜಿಗಳ ಕ್ಷೇತ್ರಗಳಲ್ಲಿ ಚಾಚಿಕೊಂಡಿತ್ತು. ನಿರ್ಲಕ್ಷ್ಯಕ್ಕೊಳಗಾದ ಗ್ರಾಮೀಣ ಬದುಕು, ವಿಘಟನೆಗೊಳ್ಳುತ್ತಿರುವ ಸಾಮಾಜಿಕ ಸಂರಚನೆಗಳು, ಕಟ್ಟು ಹರಿದ ಪಂಜಿನಂತೆ ದಿಕ್ಕೆಟ್ಟ ಯುವಜನತೆ ಮತ್ತು ಛಿದ್ರಗೊಳ್ಳುತ್ತಿರುವ ಅವರ ಕನಸುಗಳು, ಬರಡಾಗುತ್ತಿರುವ ಹಸಿರು ಮತ್ತು ಬರಿದಾಗುತ್ತಿರುವ ಸಂಪನ್ಮೂಲ ಅವರಲ್ಲಿ ಯಾವತ್ತೂ ತಲ್ಲಣಗಳು ಹುಟ್ಟುಹಾಕಿದ್ದವು. ಹಸಿರಾದ ಗದ್ದೆ, ತೋಟ, ಕಾಡುಗಳಲ್ಲಿ ಹಕ್ಕಿಗಳ ಚೀ….ಪೀ…. ಕಲರವ ಅನುರಣಗೊಳ್ಳುವ ಸಮೃದ್ಧ ಕನಸನ್ನು ಅವರು ಕಾಣುತ್ತಿದ್ದರು. ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಓದಿಕೊಂಡು ಅಲ್ಲಿನ ಮಾನವೀಯ ಸೆಲೆಗಳನ್ನು ಶೋಧಿಸಿ ಉಣಬಡಿಸುತ್ತಿದ್ದ ರಾಮಣ್ಣನವರು ಮಂಡ್ಯ ನೆಲವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮಂಡ್ಯವೇ ನನ್ನ ಇಂಡ್ಯಾ ಎಂದು ನಂಬಿದ್ದ ರಾಮಣ್ಣನವರ ಭಾವಕೋಶದಲ್ಲಿ ಮಂಡ್ಯ ಜಿಲ್ಲೆಯ ಸೊಗಡು, ಅಲ್ಲಿಯ ಮಣ್ಣಿನಿಂದ ಹುಟ್ಟುವ ವಿಶಿಷ್ಟ ವಾಸನೆ, ಅಲ್ಲಿನ ಸಂಸ್ಕೃತಿಯ ಗಹ್ವರದಿಂದ ಪುಟಿದೇಳುತ್ತಿದ್ದ ಸ್ವರಮೇಳ, ಜನರ ಹೃದಯ ವೈಶಾಲ್ಯ ತುಂಬಿ ತುಳುಕುತ್ತಿದ್ದವು. ಹಾಗೆಯೇ ಅಲ್ಲಿನ ಜನರ ಆಸೆಬುರುಕತನ, ಆಧುನಿಕತೆಗೆ ಶರಣಾಗಿ ಮೈಗೂಡಿಸಿಕೊಂಡ ಧಾವಂತ ಬದುಕು, ಮಾನವೀಯತೆಯನ್ನು ನುಂಗಿ ನೊಣೆಯುವ ಜಾತೀಯತೆಯ ಹುನ್ನಾರಗಳನ್ನೂ ಗ್ರಹಿಸಬಲ್ಲವರಾಗಿದ್ದರು. ಅವುಗಳನ್ನು ಕತೆಯಾಗಿಸುವ ಕಲೆಗಾರಿಕೆ ಸಿದ್ಧಿಸಿಕೊಂಡಿದ್ದರು. ಹಳ್ಳಿಗಾಡಿನ ಉರಿಬಿಸಿಲಿಂದ ಬಂದ ರಾಮಣ್ಣ ಬೆಳದಿಂಗಳನ್ನು ಅರಸಿದವರು.  ಮುಂದುವರೆದಿದೆ>>>