ಪ್ರತಿಷ್ಠಾನ

ಡಾ. ಬೆಸಗರಹಳ್ಳಿ ರಾಮಣ್ಣ ಅವರ ಬದುಕು ವೈದ್ಯವೃತ್ತಿ ಮತ್ತು ಸಾಹಿತ್ಯ ಕ್ಷೇತ್ರವನ್ನು ಮೀರಿ ಸಮಾಜ, ರಾಜಕೀಯ, ಜನಪರ ಆಂದೋಲನಗಳು, ಪರಿಸರ ಸಂರಕ್ಷಣೆ ಮುಂತಾದ ಜನಪರ ಕಾಳಜಿಗಳ ಕ್ಷೇತ್ರಗಳಲ್ಲಿ ಚಾಚಿಕೊಂಡಿತ್ತು. ನಿರ್ಲಕ್ಷ್ಯಕ್ಕೊಳಗಾದ ಗ್ರಾಮೀಣ ಬದುಕು, ವಿಘಟನೆಗೊಳ್ಳುತ್ತಿರುವ ಸಾಮಾಜಿಕ ಸಂರಚನೆಗಳು, ಕಟ್ಟು ಹರಿದ ಪಂಜಿನಂತೆ ದಿಕ್ಕೆಟ್ಟ ಯುವಜನತೆ ಮತ್ತು ಛಿದ್ರಗೊಳ್ಳುತ್ತಿರುವ ಅವರ ಕನಸುಗಳು, ಬರಡಾಗುತ್ತಿರುವ ಹಸಿರು ಮತ್ತು ಬರಿದಾಗುತ್ತಿರುವ ಸಂಪನ್ಮೂಲ ಅವರಲ್ಲಿ ಯಾವತ್ತೂ ತಲ್ಲಣಗಳು ಹುಟ್ಟುಹಾಕಿದ್ದವು. ಹಸಿರಾದ ಗದ್ದೆ, ತೋಟ, ಕಾಡುಗಳಲ್ಲಿ ಹಕ್ಕಿಗಳ ಚೀ….ಪೀ…. ಕಲರವ ಅನುರಣಗೊಳ್ಳುವ ಸಮೃದ್ಧ ಕನಸನ್ನು ಅವರು ಕಾಣುತ್ತಿದ್ದರು. ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಓದಿಕೊಂಡು ಅಲ್ಲಿನ ಮಾನವೀಯ ಸೆಲೆಗಳನ್ನು ಶೋಧಿಸಿ ಉಣಬಡಿಸುತ್ತಿದ್ದ ರಾಮಣ್ಣನವರು ಮಂಡ್ಯ ನೆಲವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮಂಡ್ಯವೇ ನನ್ನ ಇಂಡ್ಯಾ ಎಂದು ನಂಬಿದ್ದ ರಾಮಣ್ಣನವರ ಭಾವಕೋಶದಲ್ಲಿ ಮಂಡ್ಯ ಜಿಲ್ಲೆಯ ಸೊಗಡು, ಅಲ್ಲಿಯ ಮಣ್ಣಿನಿಂದ ಹುಟ್ಟುವ ವಿಶಿಷ್ಟ ವಾಸನೆ, ಅಲ್ಲಿನ ಸಂಸ್ಕೃತಿಯ ಗಹ್ವರದಿಂದ ಪುಟಿದೇಳುತ್ತಿದ್ದ ಸ್ವರಮೇಳ, ಜನರ ಹೃದಯ ವೈಶಾಲ್ಯ ತುಂಬಿ ತುಳುಕುತ್ತಿದ್ದವು. ಹಾಗೆಯೇ ಅಲ್ಲಿನ ಜನರ ಆಸೆ ಬುರುಕುತನ, ಆಧುನಿಕತೆಗೆ ಶರಣಾಗಿ ಮೈಗೂಡಿಸಿಕೊಂಡ ಧಾವಂತ ಬದುಕು, ಮಾನವೀಯತೆಯನ್ನು ನುಂಗಿ ನೊಣೆಯುವ ಜಾತೀಯತೆಯ ಹುನ್ನಾರಗಳನ್ನೂ ಗ್ರಹಿಸಬಲ್ಲವರಾಗಿದ್ದರು. ಅವುಗಳನ್ನು ಕತೆಯಾಗಿಸುವ ಕಲೆಗಾರಿಕೆ ಸಿದ್ಧಿಸಿಕೊಂಡಿದ್ದರು. ಹಳ್ಳಿಗಾಡಿನ ಉರಿಬಿಸಿಲಿಂದ ಬಂದ ರಾಮಣ್ಣ ಬೆಳದಿಂಗಳನ್ನು ಅರಸಿದವರು.

ತಮ್ಮ ವೈದ್ಯವೃತ್ತಿಯನ್ನು ಬಹುಪಾಲು ಮಂಡ್ಯದ ಹಳ್ಳಿಗಾಡಿನಲ್ಲಿಯೇ ಸವೆಸಿದ ರಾಮಣ್ಣ ಆ ಜಿಲ್ಲೆಯ ಬದುಕಿನೊಡನೆ ಬೆರೆತಿದ್ದರು. ಹಾಗೆಯೇ ತಮ್ಮ ಅಪರೂಪದ ಕಥನ ಕಲೆಗಾರಿಕೆಯಿಂದ ನಾಡಿನಾದ್ಯಂತ ಪರಿಚಿತರಾಗಿದ್ದರು. ಸಹೃದಯರ ಹೃದಯವನ್ನು ಮುಟ್ಟಿದ್ದರು. ಸಜ್ಜನಿಕೆ, ಸರಳತೆ ಮತ್ತು ಭಾವಪೂರಿತ ಗೆಳೆತನದ ಮೂಲಕ ಅಪಾರ ಸ್ನೇಹಿತರ ಬಳಗವನ್ನು ನಾಡಿನಾದ್ಯಂತ ಕಟ್ಟಿದ್ದರು. ಬಿಹಾರದಲ್ಲಿ ಸ್ಫೋಟಗೊಂಡ ಸಿಡುಬು ರೋಗ ನಿರ್ಮೂಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಸಂಘಟಿಸಿದ ವೈದ್ಯರ ತಂಡದಲ್ಲಿ ರಾಮಣ್ಣನವರು ಸದಸ್ಯರಾಗಿದ್ದರು. ಸರ್ಕಾರಿ ಕೆಲಸದಲ್ಲಿದ್ದು, ಬಂಡಾಯ ಸಾಹಿತ್ಯ ಸಂಘಟನೆಗೆ ಬೆಂಬಲ ಘೋಷಿಸಿ ಆ ಚಳುವಳಿಯ ಯುವ ಪ್ರತಿನಿಧಿಗಳೊಡನೆ ಬೆರೆತು ಮಾನವೀಯ ಚಿಲುಮೆಗಳನ್ನು ಹುಟ್ಟು ಹಾಕಿದರು. ಕೊಡಿಯಾಲದಂತಹ ಗ್ರಾಮ ಪರಿಸರದಲ್ಲಿ ಮರಗಿಡಗಳನ್ನು ಬೆಳೆಸಿ ಹಸಿರು ಚಿಮ್ಮಿಸುವ ಪ್ರಯೋಗದಲ್ಲಿ ಯಶಸ್ಸು ಕಂಡರು.

ಸಾಮಾಜಿಕ ಅಸಮಾನತೆ, ಶೋಷಣೆ ಮತ್ತು ಸಾಂಸ್ಕೃತಿಕ ದಬ್ಬಾಳಿಕೆ ವಿರುದ್ಧ ಸದಾ ಉರಿಯುವ ಸಿಟ್ಟಿನಿಂದ ಅಬ್ಬರಿಸುತ್ತಿದ್ದ ರಾಮಣ್ಣನವರು ಅಪರೂಪದ ಭಾವಜೀವಿ. ಅವರ ಚಿಂತನೆಗಳಿಗೆ ತರ್ಕದ ಹಂಗಿರಲಿಲ್ಲ. ಮಾನವೀಯತೆಯ ಅಸ್ತಿಭಾರದಲ್ಲಿ ಅದು ರೂಪುಗೊಂಡಿತ್ತು. ಇಂಥ ಅಪರೂಪದ ವ್ಯಕ್ತಿತ್ವದ ರಾಮಣ್ಣನವರು ಅನೇಕ ಕನಸುಗಳನ್ನು ಹೊತ್ತುಕೊಂಡೇ ಇಹಲೋಕ ತ್ಯಜಿಸಿದರು. ಅವರು ಆರಂಭಿಸಿದ ಅನೇಕ ಕಾರ್ಯಗಳನ್ನು ಮುಂದುವರೆಸುವ ಮತ್ತು ಅವರ ಆಶಯಗಳನ್ನು ವಿಸ್ತರಿಸುವ ಧ್ಯೇಯದೊಡನೆ, ಸಮಾನಾಸಕ್ತರ ಗೆಳೆಯರಿಂದ ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಮೈದಾಳಿದೆ. ನಾಡಿನ ಎಲ್ಲ ಜನಪರ ಮನಸ್ಸುಗಳ ಹಾರೈಕೆ ಮತ್ತು ಮಾರ್ಗದರ್ಶನದೊಡನೆ ತಾನು ಹಾಕಿಕೊಂಡಿರುವ ಗುರಿಗಳನ್ನು ಮುಟ್ಟುವ, ವಿಸ್ತರಿಸಿಕೊಳ್ಳುವ ಆಶಯ ಹೊಂದಿದೆ.

ಪ್ರತಿಷ್ಠಾನವು ಸನ್ ಎರಡು ಸಾವಿರದ ಎಂಟನೇ ಇಸವಿ ಡಿಸೆಂಬರ್ ತಿಂಗಳು ಹದಿನೇಳನೇ ತಾರೀಖು (೧೭೧೨೨೦೦೮) ಬುಧವಾರ ಬೆಮಗಳೂರಿನಲ್ಲಿ ನೋಂದಾವಣೆಯಾಯಿತು.

%d bloggers like this: